ಸುತ್ತೂರು
	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಒಂದು ಗ್ರಾಮ; ಪುಣ್ಯಕ್ಷೇತ್ರ. ಕಪಿಲಾ ನದಿಯ ಬಲದಂಡೆಯ ಮೇಲೆ ನಂಜನಗೂಡಿನ ಈಶಾನ್ಯಕ್ಕೆ 18 ಕಿಮೀ ದೂರದಲ್ಲಿದೆ. ಹಿಂದೆ ಈ ಊರಿಗೆ ಶ್ರೋತ್ರಿಯೂರು ಎಂಬ ಹೆಸರಿದ್ದು ದಾಗಿ 1032ರ ಒಂದು ಚೋಳ ಶಾಸನ, 1169ರ ಹೊಯ್ಸಳ ಶಾಸನವೊಂದರಿಂದ ತಿಳಿದುಬರುತ್ತದೆ. ವಿಜಯನಗರದ ಕಾಲದ ದಾಖಲೆಗಳಲ್ಲಿ ಇದನ್ನು ಸುತ್ತೂರು ಎಂದು ಕರೆದಿರುವುದು ಕಂಡುಬರುತ್ತದೆ. 

	ಹೊಯ್ಸಳ ಒಂದನೆಯ ನರಸಿಂಹನ ದಂಡನಾಯಕ ಲಕ್ಷ್ಮಯ್ಯ 1169ರ ಸುಮಾರಿನಲ್ಲಿ ಈ ಊರನ್ನು ತನ್ನ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಇಲ್ಲಿ ಆಗ ಕಟ್ಟಿದ್ದೆನ್ನಲಾದ ಸೋಮೇಶ್ವರ ದೇವಾಲಯ ವಿದೆ. ಮುಂಭಾಗದ ಹಜಾರವನ್ನು 1264ರಲ್ಲಿ ಕಟ್ಟಿರುವುದಾಗಿ ತಿಳಿದುಬರುತ್ತದೆ. ಗರ್ಭಗುಡಿಯಲ್ಲಿ ಒಂದು ಲಿಂಗವೂ ದಕ್ಷಿಣದ ಕೋಣೆಯಲ್ಲಿ ಹರಿಹರೇಶ್ವರ ವಿಗ್ರಹವೂ ಇವೆ. ಚತುರ್ಬಾಹುಗಳಿರುವ ಇಲ್ಲಿನ ಹರಿಹರೇಶ್ವರ ವಿಗ್ರಹ ಒಂದು ಸುಂದರ ಕಲಾಕೃತಿ. ಈ ವಿಗ್ರಹದ ಬಲಪಾಶ್ರ್ವದಲ್ಲಿ ಪಾರ್ವತಿಯ, ಎಡಪಾಶ್ರ್ವದಲ್ಲಿ ಲಕ್ಷ್ಮಿಯ ವಿಗ್ರಹಗಳಿವೆ. ಆಧಾರಪೀಠದ ಮೇಲೆ ನಂದಿ ಮತ್ತು ಗರುಡರನ್ನು ಕೆತ್ತಿದೆ. ನವರಂಗದ ಎಡಗಡೆ 3 1/2 ಮೂರುವರೆ ಅಡಿ ಎತ್ತರದ ಸ್ತ್ರೀ ದೇವತಾ ವಿಗ್ರಹ ಎರಡು ಮುಂಗುಸಿಗಳ ಮೇಲೆ ನಿಂತಿರುವಂತೆ ಕೆತ್ತಿದೆ. 

	ಇಲ್ಲಿನ ನಾರಾಯಣ ದೇವಾಲಯವೂ ಹೊಯ್ಸಳರ ಕಾಲದ ರಚನೆ. ಶಿಥಿಲವಾದ ಈ ದೇವಾಲಯದ ಗರ್ಭಗುಡಿಯಲ್ಲಿ 3 1/2 ಎತ್ತರದ ನಾರಾಯಣ ವಿಗ್ರಹವಿದೆ. ಇಲ್ಲಿನ ಶಾಸನವೊಂದರಲ್ಲಿ ಈ ದೇವಾಲಯವನ್ನು 1169ರಲ್ಲಿ ಲಕ್ಷ್ಮಯ್ಯ ಕಟ್ಟಿಸಿದನೆಂದು ಉಲ್ಲೇಖಿಸಿದೆ. ಅದೇ ಶಾಸನದಲ್ಲಿ ನಾರಾಯಣ ವಿಗ್ರಹವನ್ನು ನಾಗಕೇಶವ ಎಂದು ಹೆಸರಿಸಿದೆ. 

	ಈ ಗ್ರಾಮದಲ್ಲಿ ಪ್ರಾಚೀನ ಪರಂಪರೆಯ ಒಂದು ವೀರಶೈವ ಮಠವಿದೆ. ಇದು ಸುತ್ತೂರು ಮಠವೆಂದೇ ಪ್ರಸಿದ್ಧ. ಈಚೆಗೆ ದೊರೆತಿರುವ ಆಧಾರಗಳ ಮೇಲೆ ಈ ಮಠದ ಪ್ರಾಚೀನತೆಯನ್ನು 10ನೆಯ ಶತಮಾನದ ಮಧ್ಯಭಾಗಕ್ಕೆ ಒಯ್ಯುವ ಯತ್ನ ನಡೆದಿದೆ. ನಂಜನಗೂಡಿನ ಮತ್ತು 1032-1090ರ ಶಾಸನದಲ್ಲಿ ಉಕ್ತವಾಗಿರುವ ಈಶಾನ್ಯೇಶ್ವರ ಒಡೆಯರ್ ಎಂಬುವರು ಕಂಚಿಯ ರಾಜೇಂದ್ರ ಚೋಳನಿಗೆ ಗುರುವಾಗಿದ್ದರೆಂದು ನಂಜನಗೂಡು 164ರ ಶಾಸನದ ಪ್ರಕಾರ ತಿಳಿದುಬರುತ್ತದೆ. ಶ್ರೀ ಪಂಡಿತಾರಾಧ್ಯರ ಗಣಸಹಸ್ರನಾಮದಲ್ಲಿ ಶಿವರಾತ್ರೇಶ್ವರ ಗುರುಗ ಳೊಬ್ಬರ ಹೆಸರಿದೆ. ಈಶಾನ್ಯೇಶ್ವರರಿಗೂ ಹಿಂದೆ ಸುಮಾರು ಒಂದು ತಲೆಮಾರಿನಷ್ಟು ಹಿಂದಿನವರೆಂದು ಭಾವಿಸುವುದಾದರೆ, ಶ್ರೀ ಮಠದ ಐತಿಹ್ಯವನ್ನು ಆಧಾರ ಮಾಡಿಕೊಂಡು ಆ ಶಿವರಾತ್ರೇಶ್ವರರೇ ಶ್ರೀ ಮಠದ ಸ್ಥಾಪಕರೂ ಆದಿಶಿವರಾತ್ರೇಶ್ವರರೂ ಆಗುತ್ತಾರೆ. ಆದರೆ ಗಣಸಹಸ್ರನಾಮ ದಲ್ಲಿ ಈ ಹೆಸರಿನ ಇನ್ನಿಬ್ಬರು ಯತಿಗಳ ಉಲ್ಲೇಖವಿರುವುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಇಲ್ಲಿನ ಮಠಾಧೀಶರ ಪರಂಪರೆಯಲ್ಲಿ ಕೆಲವರು ಉದ್ಧಾಮಪಂಡಿತ ರಾಗಿದ್ದು ಗ್ರಂಥರಚನೆ ಮಾಡಿದ್ದಂತೆ ತಿಳಿದುಬರುವುದು. ಅವರಲ್ಲೊಬ್ಬರಾದ ಶಿವರಾತ್ರಿ ಸ್ವಾಮಿಗಳ ಮತ್ತು ಇತರ ಸಂತರ ಗದ್ದುಗೆಗಳು ಕುಪ್ಪರವಳ್ಳಿ ಯಿಂದ ಬರುವ ರಸ್ತೆಯ ಎಡಗಡೆಯಲ್ಲಿರುವ ಒಂದು ಮಂದಿರದಲ್ಲಿವೆ. ಈ ಮಠದವರು ಸೋಮೇಶ್ವರ ದೇವಾಲಯವನ್ನು ಭುಜಂಗರಾಯನಿಂದ ನಿರ್ಮಿತವಾದ (ಸು.1508) ವೀರೇಶ್ವರ ದೇವಾಲಯವನ್ನೂ ಜೀರ್ಣೋದ್ಧಾರ ಮಾಡಿಸಿದ್ದಾರೆ. ಈ ಮಠ ಮೈಸೂರು ಜಿಲ್ಲೆಯ ಅನೇಕ ಕಡೆಗಳಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದೆ. ಕೆಲವು ಬಡ ವಿದ್ಯಾರ್ಥಿಗಳಿಗೆ ಊಟ ವಸತಿಗಳನ್ನು ಒದಗಿಸುತ್ತಿದೆ.  
											(ಎಸ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ